ಜೀ ದಶಕದ ಸಂಭ್ರಮದಲ್ಲಿ ತಾರೆಗಳ ಸಮಾಗಮ
Posted date: 26 Fri, Aug 2016 – 11:18:31 AM

 ಇತ್ತೀಚೆಗೆ ಬೆಂಗಳೂರಿನ ಕಂಠೀವರ ಒಳಾಂಗಣ ಕ್ರೀಡಾಂಗಣದಲ್ಲಿ ಜೀ ವಾಹಿನಿಯ  ದಶಕದ ಸಂಭ್ರಮದ ವರ್ಣರಂಜಿತ ಕಾರ್ಯಕ್ರಮ  ಅದ್ಧೂರಿಯಾಗಿ ನೆರವೇರಿದೆ.  ದಶಕದ ಸವಿನೆನಪುಗಳನ್ನೆಲ್ಲಾ ಮೆಲುಕುಹಾಕಿ, ಕನ್ನಡಿಗರು ಮೆಚ್ಚಿದ ಮಹಾನ್ ಸಾಧಕರನ್ನು ಹಾಗೂ ತನ್ನೊಟ್ಟಿಗೆ ಬೆಳೆದು ಯಶಸ್ಸಿನ ಉತ್ತುಂಗಕ್ಕೇರಿದ ಸಾಧಕರನ್ನು ಗೌರವಿಸಿ, ಸನ್ಮಾನಿಸುವ ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಲವಾರು ತಾರೆಗಳು ಭಾಗವಹಿಸಿದ್ದು ವಿಶೇಷವಾಗಿತ್ತು.     
    ಜೀ ಕನ್ನಡ ವಾಹಿನಿ ತನ್ನ ವೀಕ್ಷಕರಿಗೆ ಕ್ರಿಯಾತ್ಮಕ ಕಥೆಗಳನ್ನು, ಸುಂದರ ಧಾರಾವಾಹಿಗಳನ್ನು  ಕೊಡುಗೆಯಾಗಿ ಕೊಟ್ಟಿದ್ದು, ಅವರು ಮೆಚ್ಚುವಂಥ ಶೋಗಳನ್ನು ಕೊಡುವುದರ ಮೂಲಕ  ಕನ್ನಡಿಗರಿಂದ ಸೈ ಎನಿಸಿಕೊಂಡಿದೆ. ಸದಾ ಹೊಸತನಕ್ಕೆ ತುಡಿಯುತ್ತಾ ವೀಕ್ಷಕರನ್ನು  ರಂಜಿಸುತ್ತಾ ಬಂದಿರುವ ಈ  ವಾಹಿನಿ ತನ್ನ  ದಶಕದ ಸಂಭ್ರಮದ ಸಮಾರಂಭವನ್ನು ಅದ್ಧೂರಿಯಾಗಿ ಆಯೋಜನೆ ಮಾಡಿತ್ತು. ಇದೇ ೨೭ರ ಶನಿವಾರ ಮತ್ತು ೨೮ರ ಭಾನುವಾರ ಸಂಜೆ ೬.೩೦ಕ್ಕೆ ಜೀ ಕನ್ನಡ ವಾಹಿನಿ ಈ ಸುಂದರ ಸಮಾರಂಭದ ಮಧುರ ಕ್ಷಣಗಳನ್ನು ತನ್ನ ವೀಕ್ಷಕರಿಗಾಗಿ  ಪ್ರಸಾರ ಮಾಡುತ್ತಿದೆ.  
   ಸುಂದರವಾದ ಆ ವೇದಿಕೆಯ ಮೇಲೆ ಸಾಧಕರೆಲ್ಲಾ ಒಬ್ಬೊಬ್ಬರಾಗಿ ಬಂದಂತೆ ವೀಕ್ಷಕರು ಹರ್ಷದಿಂದ ಕರತಾಡನ ಮಾಡಿದರು. ನಟ ರಮೇಶ್ ಅರವಿಂದ್ ಈ ಕಾರ್ಯಕ್ರಮದ ಸಾರಥ್ಯ ವಹಿಸಿಕೊಂಡಿದ್ದರು. ಅಂದು ನಡೆದ  ಕಾರ್ಯಕ್ರಮದಲ್ಲಿ  ೨೦ ಸಾಧಕರ ಬದುಕಿನ ಹಾದಿಯ ಪುಟಗಳನ್ನು ತೆರೆಯಮೇಲೆ ನೋಡಿದ ಪ್ರೇಕ್ಷಕರು ಭಾವಪರವಶರಾದರು. ಈ ದಶಕದಲ್ಲಿ ತನ್ನೊಟ್ಟಿಗೇ ಬೆಳೆದು ಯಶಸ್ಸನ್ನು ಕಂಡ ಸಾಧಕರ ಜೀವಮಾನದ ಸಾಧನೆಯನ್ನು ಗುರುತಿಸಿ  ಅವರನ್ನೂ ಕೂಡ ಜೀ ವಾಹಿನಿ ಗೌರವಿಸಿತು. ಇಡೀ ಕನ್ನಡ ಚಿತ್ರರಂಗವನ್ನೇ ಒಂದೆಡೆ ಸೇರಿಸಿದಂತಿದ್ದ ಈ ಸಮಾರಂಭದಲ್ಲಿ ಕನ್ನಡ ನಾಡು ಹೆಮ್ಮೆಪಡುವಂಥ ಮಹಾನ್ ಸಾಧಕರು ಕಾಣಿಸಿಕೊಂಡದ್ದು ವಿಶೇಷ. ನಿ.ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ, ಉದ್ಯಮಿ ಇನ್ಫೋಸಿಸ್‌ನ ನಾರಾಯಣ ಮೂರ್ತಿ, ಕನ್ನಡಕ್ಕೆ ಮತ್ತೊಂದು ಜ್ಞಾನಪೀಠದ ಗರಿಯನ್ನು ತಂದುಕೊಟ್ಟ ಚಂದ್ರಶೇಖರ ಕಂಬಾರ,  ಕ್ರಿಕೆಟ್ ಪ್ರೇಮಿಗಳ  ಮೆಚ್ಚಿನ ಆಟಗಾರ ಅನಿಲ್ ಕುಂಬ್ಳೆಯಂತಹ ಸಾಧಕರನ್ನು ಅಲ್ಲಿ ಗೌರವಿಸಲಾಯಿತು.  
    ಗೌರವ ಸ್ವೀಕರಿಸಿ ಮಾತನಾಡಿದ ಸಂತೋಷ್ ಹೆಗ್ಡೆ, ಕರ್ನಾಟಕ ಲೋಕಾಯುಕ್ತದಂತಹ ಉತ್ತಮವಾದ ಸಂಸ್ಥೆ ಈ ದೇಶದಲ್ಲಿ ಇನ್ನೊಂದಿಲ್ಲ  ಎಂದು ಹೇಳಿದರು.  ಪಬ್ಲಿಕ್ ಟಿವಿ.ಯ ರಂಗನಾಥ್ ಅವರು  ತಮ್ಮನ್ನು  ಪ್ರತಿದಿನ ಹುಡುಕಿಕೊಂಡು ಬರುವ ಪಬ್ಲಿಕ್ ಹೀರೋಗಳಿಗೆ ತಮಗೆ ಬಂದ ಪ್ರಶಸ್ತಿಯನ್ನು ಅರ್ಪಿಸಿದರು. ಇನ್ನು   ದಶಕದ ಎಂಟರ್‌ಟೈನರ್ ಪ್ರಶಸ್ತಿಯನ್ನು ಸ್ವೀಕರಿಸಿದ ನಟ ಸುದೀಪ್ ಮಾತನಾಡಿ ಈ ಪ್ರಶಸ್ತಿ ಪುನೀತ್‌ರಾಜ್‌ಕುಮಾರ ಮತ್ತು ದರ್ಶನ್ ಅವರಿಗೆ ಸಲ್ಲಬೇಕು, ಅವರ ಪರವಾಗಿ ನಾನು ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದೇನೆ ಎಂದರು. ಕನ್ನಡದ ಹಾಡುಗಳನ್ನು ಪ್ರೀತಿಸುವ ಜನ ಇನ್ನೂ ಇದ್ದಾರೆ ಎಂದು ತೋರಿಸಿಕೊಟ್ಟವರು ನೀವು ಎನ್ನುತ್ತಾ ತಮ್ಮ  ಪ್ರಶಸ್ತಿಯನ್ನು ಸಾಹಿತಿ ಜಯಂತ್ ಕಾಯ್ಕಿಣಿ. ಸ್ವೀಕರಿಸಿದರು.   ದಶಕದ ನಟ, ನಟಿ ಪ್ರಶಸ್ತಿಯನ್ನು ಕನ್ನಡ ಚಲನಚಿತ್ರರಂಗದ ರಿಯಲ್‌ಪೇರ್ ಯಶ್ ಮತ್ತು ರಾಧಿಕಾ ಪಂಡಿತ್ ಸ್ವೀಕರಿಸಿದರು. ವಿಜೇತರೆಲ್ಲರಿಗೂ ರೆಬಲ್‌ಸ್ಟಾರ್ ಅಂಬರೀಶ್ ಪ್ರಶಸ್ತಿ ನೀಡಿದರೆ, ಅಂಬರೀಶ್ ಅವರಿಗೆ  ಡ್ರಾಮಾ ಜೂನಿಯರ‍್ಸ್‌ನ ಮಕ್ಕಳು ಗೌರವಿಸಿ ಸನ್ಮಾನಿಸಿದರು. ನಟಿ ಪ್ರಿಯಾಮಣಿ, ಸುಮಲತಾ ಅಂಬರೀಶ್ ಹಾಗೂ ಪ್ರಿಯಂಕ ಉಪೇಂದ್ರ ಸಮಾರಂಭದಲ್ಲಿ ಉಪಸ್ಥಿತರಿದ್ದರು.
   ಗೋಲ್ಡನ್‌ಸ್ಟಾರ್ ಗಣೇಶ್ ಅವರ ಅತ್ಯಾಕರ್ಷಕ ನೃತ್ಯ, ಕಿರುತೆರೆ ಕಲಾವಿದರ ಅದ್ಭುತವಾದ ಡಾನ್ಸ್  ಜೊತೆಗೆ ಮಾಸ್ಟರ್ ಆನಂದ್ ಹಾಗೂ ಅನುಶ್ರೀ ಅವರ ನಿರೂಪಣೆ ಕಾರ್ಯಕ್ರಮಕ್ಕೆ ಮತ್ತಷ್ಟು ಲವಲವಿಕೆಯ ಮೆರಗು ಮೂಡಿಸಿತು. ನಾಡಿನ ೨೦ ಮಹಾನ್ ಸಾಧಕರ‍್ನು ವೇದಿಕೆಗೆ ಕರೆಸಿ ಗೌರವಿಸಿದ ಜೀ ವಾಹಿನಿ,  ಒಂದು ಅರ್ಥಪೂರ್ಣವಾದ  ಕಾರ್ಯಕ್ರಮಕ್ಕೆ  ಸಾಕ್ಷಿಯಾಯಿತು.

GALLERY
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed